ನೀಲಕಂಠ ದೀಕ್ಷಿತ  -
ಅಪ್ಪಯ್ಯ ದೀಕ್ಷಿತರ ಸಹೋದರ ಆಚ್ಚಾನ್ದೀಕ್ಷಿತರ ಮೊಮ್ಮಗ. ನಾರಾಯಣ ದೀಕ್ಷಿತರ ಮಗ. ತಾಯಿ ಭೂಮಿದೇವಿ. ಸ್ಥಳ, ಕಾಂಚೀಪುರದ ಹತ್ತಿರವಿರುವ ಅಡಿಯಪಲವೆಂಬ ಅಗ್ರಹಾರ. 17ನೆಯ ಶತಕದಲ್ಲಿದ್ದ ಈತ ಆ ಶತಕದ ಕೊನೆಯಲ್ಲಿ ಕೀರ್ತಿಶಿಖರವನ್ನೇರಿದ. ಪಂಡಿತವಂಶಜನಾದ ಈತ ಪೂರ್ವೋತ್ತರಮೀಮಂಸಾ, ವ್ಯಾಕರಣ, ಶೈವತತ್ತ್ವಕಾವ್ಯಕಲೆ ಇತ್ಯಾದಿ ಸರ್ವ ವಿದ್ಯಾಕೋವಿದ. ನೀಲಕಂಠ ವಿಜಯ ಚಂಪೂ, ಶಿವಲೀಲಾರ್ಣವ, ಶಿವತತ್ತ್ವ ರಹಸ್ಯ, ಶಿವೋತ್ಕರ್ಷಮಂಜರೀ, ಗಂಗಾವತರಣ, ಶಾಂತಿವಿಲಾಸ, ಆನಂದಸಾಗರಸ್ತವ, ಅನ್ಯಾಪದೇಶಶತಕ, ಕಲಿವಿಡಂಬನ, ಸಭಾರಂಜನಶತಕ, ವೈರಾಗ್ಯಶತಕ, ನಳಚರಿತಂ ಇತ್ಯಾದಿ ಇವನ ಕೃತಿಗಳು ಪ್ರಸಿದ್ಧಿಪಡೆದಿವೆ. ತನ್ನ ತಾತ 72ನೆಯ ವಯಸ್ಸಿಗೆ ಅಪ್ಪಯ್ಯ ದೀಕ್ಷಿತರು 104 ಪ್ರಬಂಧಗಳನ್ನು ರಚಿಸಿದ್ದರೆಂದು ಈತ ತನ್ನ ಶಿವಲೀಲಾರ್ಣವ ಕಾವ್ಯದಲ್ಲಿ ಹೊಗಳಿ, ಅವರ ವಂಶದಲ್ಲಿ ಜನಿಸಿದ ತಾನು, ದ್ವಿತೀಯ ಶಂಕರರಾದ ಅವರಿಗೆ ತಕ್ಕ ಮೊಮ್ಮಗನೆಂಬ ಅಭಿಮಾನ ಗೌರವಗಳನ್ನು ಸೂಚಿಸಿದ್ದಾನೆ. ಉದ್ದಾಮ ವೈಯಾಕರಣಿಯೂ ಕಾವ್ಯವಿದ್ಯೆಯಲ್ಲಿ ನಿಷ್ಣಾತನೂ ದಾರ್ಶನಿಕ ಧುರೀಣನೂ ಎನಿಸಿದ ವೆಂಕಟೇಶ್ವರನ (ವೆಂಕಟಮುಖಿ) ಶಿಷ್ಯನಿವನೆಂದು ಗಂಗಾವತರಣದ ಉಪೋದ್ಘಾತದಿಂದ ತಿಳಿದುಬರುತ್ತದೆ. ಅಯ್ಯಾದೀಕ್ಷಿತ ಎಂಬುದು ಈತನ ಅಡ್ಡ ಹೆಸರು. ನೀಲಕಂಠವಿಜಯವನ್ನು ತಾನು 1637ರಲ್ಲಿ ಬರೆದುದಾಗಿ ಹೇಳಿಕೊಂಡಿರುವುದರಿಂದ ಈತನ ಕಾಲ 17ನೆಯ ಶತಮಾನವೆನ್ನಬಹುದು. ಇವನು ಮಧುರೆಯ ಪಾಂಡ್ಯರಾಜ ತಿರುಮಲನಾಯಕನ ಆಸ್ಥಾನಕವಿ ಹಾಗೂ ಪ್ರಧಾನಿಯಾಗಿದ್ದುಕೊಂಡು ಕವಿತಾ ಮಾಧುರ್ಯದ ಮಹಾಸಾಧನೆಯನ್ನೂ ಕೈಗೊಂಡು ಯಶಸ್ವಿಯಾಗಿ ನಿರ್ವಹಿಸಿದ್ದಾನೆ. ಈತನ ಸಮಕಾಲೀನರಾದ ಯಾವ ಕವಿಗಳಾಗಲೀ ದಾರ್ಶನಿಕರಾಗಲೀ ಈತನಿಗೆ ಸರಿಸಮಾನರೆನಿಸಿಕೊಳ್ಳಲಿಲ್ಲ. ಈತನ ಕವಿತೆ ನಿಸರ್ಗ ಸುಭಗವಾದುದು. ಪಾಂಡಿತ್ಯ ಸಂಕೇತವಾಗಿ, ಕಾವ್ಯ ಚಂಪೂ ನಾಟಕಗಳನ್ನು ಬರೆಯುವುದು ಅನೂಚಾನವಾಗಿ ಸಂಸ್ಕøತ ಪಂಡಿತರಲ್ಲಿ, ಕವಿಗಳಲ್ಲಿ, ದಾರ್ಶನಿಕರಲ್ಲಿ ನಾವು ಕಾಣಬಹುದಾದ ಪದ್ಧತಿ. ಈ ಪದ್ಧತಿಗೆ ನೀಲಕಂಠ ದೀಕ್ಷಿತನೂ ಹೊರತಲ್ಲ.

ಈತನ ನೀಲಕಂಠವಿಜಯ ಚಂಪೂ ಎಂಬುದು ಚಂಪೂ ಕಾವ್ಯಗಳಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಗಳಿಸಿದೆ. ರಸಭಾವಪರಿಪೂರ್ಣವಾದ ಕಾವ್ಯವಿದು. ಈತನ ಉಳಿದ ಕಾವ್ಯ ಹಾಗೂ ಸತೋತ್ರಾದಿಗಳಂತೆ ಇದೂ ಶಿವಮಹಾತ್ಮ್ಯ ಪ್ರತಿಪಾದಕ ಕಾವ್ಯ. ಸಮುದ್ರಮಥನದಲ್ಲಿ ಬಂದ ಹಾಲಾಹಲವನ್ನು ಸೇವಿಸಿ ಲೋಕವನ್ನು ರಕ್ಷಿಸಲು ಯಾವ ದೇವರೂ ಮುಂದೆ ಬಾರದಿದ್ದಾಗ ಶಿವ ಮುಂದೆ ಬಂದು ಆ ಕೆಲಸವನ್ನು ಮಾಡಿ ಲೋಕವನ್ನು ರಕ್ಷಿಸಿದ ವಿಷಯವೇ ಕಾವ್ಯದ ವಸ್ತು. ಕವಿ ಈ ಗ್ರಂಥದಲ್ಲಿ ತನ್ನ ಅಗಾಧ ಪಾಂಡಿತ್ಯವನ್ನೂ ಕಾವ್ಯರಚನಾ ನೈಪುಣ್ಯವನ್ನು ವ್ಯಕ್ತಪಡಿಸಿದ್ದಾನೆ. ಶೈಲಿ ದುರ್ಗಮವಲ್ಲದಿದ್ದರೂ ಸುಲಭವೇನಲ್ಲ. ಈ ಗ್ರಂಥಕ್ಕೆ ತಂಜಾವೂರು ದೊರೆ ತುಕ್ಕೋಜಿರಾಜನ (1728-1735) ಮಂತ್ರಿಯಾಗಿದ್ದ ಘನಶ್ಯಾಮ (ಆರ್ಯಕ) ವ್ಯಾಖ್ಯಾನ ಬರೆದಿದ್ದಾನೆ.

ಕೆಲವು ವಿಮರ್ಶಕರು ಶಿವಲೀಲಾರ್ಣವ ಕಾವ್ಯ ಈತನ ಮುಖ್ಯ ಕೃತಿ ಎನ್ನುವುದೂ ಉಂಟು. ಸ್ಕಾಂದಪುರಾಣದ 4ನೇ ಖಂಡದಲ್ಲಿ ಪ್ರಸ್ತುತವಾದ ಹಾಲಾಸ ಮಾಹತ್ಮ್ಯೆ ಅಥವಾ ಮಧುರಾ ನಗರದ ಸುಂದರೇಶನ (ಹಾಲಾಸ್ಯ) ಚತುಷ್ಷಷ್ಟಿ ಲೀಲೆಗಳೇ ಈ ಕಾವ್ಯದ ವಸ್ತು. ಮಧುರೆಯ ಸುಂದರನಾಥ ದೇವಾಲಯದಲ್ಲಿ ಈ 64 ಲೀಲೆಗಳು ಈಗಲೂ ಆಚರಿಸಲ್ಪಡುತ್ತಿವೆ. ಶಿವ ಪಾಂಡ್ಯ ವಂಶದ ರಾಜ ಸುಂದರ ಪಾಂಡ್ಯನಾಗಿ ಅವತರಿಸಿ ಭಕ್ತೋದ್ಧಾರಕ್ಕಾಗಿ ಈ ಲೀಲೆಗಳನ್ನು ಪ್ರದರ್ಶಿಸಿದನೆಂದು ಪ್ರತೀತಿ. ಕಾವ್ಯ ಶೈಲಿ ನಿರರ್ಗಳವಾಗಿದೆ. ಸರ್ವತೋಮುಖವಾದ ಪ್ರೌಢ ಪಾಂಡಿತ್ಯವನ್ನು ನಾವಿಲ್ಲಿ ಕಾಣಬಹುದು.

ಗಂಗಾವತರಣ ಕಾವ್ಯ ಗಂಗಾವತರಣಕ್ಕೆ ಸಂಬಂಧಿಸಿದೆ. ನಳಚರಿತಂ ಎಂಬ ಏಳಂಕದ ನಾಟಕ ನಳರಾಜನ ಚರಿತ್ರೆಯನ್ನವಲಂಬಿಸಿ ಬರೆದುದಾಗಿದೆ. ಶಾಂತಿವಿಲಾಸ, ಕಲಿವಿಡಂಬನ, ಆನಂದಸಾಗರಸ್ತವ, ಅನ್ಯಾಪದೇಶ (ಅನ್ಯೋಕ್ತಿ)ಶತಕ, ಸಭಾರಂಜನ ಶತಕ, ವೈರಾಗ್ಯಶತಕ, ಶಿವೋತ್ಕರ್ಷಮಂಜರಿ ಇತ್ಯಾದಿಗಳು ಈತನ ಪ್ರೌಢ ಪ್ರಬಂಧಗಳು. 

 	ಶಿವತತ್ತ್ವ ರಹಸ್ಯದಲ್ಲಿ ಅದ್ವೈತ ಪ್ರಕ್ರಿಯೆ ಚೆನ್ನಾಗಿ ವ್ಯವಸ್ಥೆಗೊಂಡಿದ್ದು ಈತನಿಗೆ ಅದ್ವೈತ ವಿದ್ಯಾಗುರುವೆಂಬ ಬಿರುದನ್ನು ತಂದುಕೊಟ್ಟಿದೆ.  ಈತನ ಮಕ್ಕಳೂ ಉತ್ತಮ ಕವಿಗಳೆಂದು ತಿಳಿಯುತ್ತದೆ.      				 (ಜಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ